ಕೊಡೈಕ್ಕಾನಲ್

ತಮಿಳುನಾಡಿನ ಮಧುರೈ ಜಿಲ್ಲೆಗೆ ಸೇರಿದ ತಾಲ್ಲೂಕು. ಕೊಡೈಕ್ಕಾನಲ್ ತಾಲ್ಲೂಕಿನ ಕೇಂದ್ರ. ತಾಲ್ಲೂಕಿನಲ್ಲಿ ಆರಕ್ಷಿತ ಅರಣ್ಯ ಪ್ರದೇಶವೇ ಹೆಚ್ಚಾಗಿದೆ. ಈ ತಾಲ್ಲೂಕಿನಲ್ಲಿ ಸುಮಾರು 15 ಗ್ರಾಮಗಳಿವೆ. ಪಶ್ಚಿಮಕ್ಕಿರುವ ಪಳನಿ ಬೆಟ್ಟಗಳ ಸಾಲು ತಾಲ್ಲೂಕನ್ನು ಅತಿವೃಷ್ಟಿಯಿಂದ ರಕ್ಷಿಸುತ್ತದೆ. ವಾರ್ಷಿಕ ಮಳೆ ಸುಮಾರು 165". ನೆಯ್ಗೆ. ಹಗ್ಗ ತಯಾರಿಕೆ ಮತ್ತು ಕುಂಭಕಲೆ-ಇವು ತಾಲ್ಲೂಕಿನ ಮುಖ್ಯ ಗೃಹಕೈಗಾರಿಕೆಗಳು.

ಕೊಡೈಕ್ಕಾನಲ್ ಪಟ್ಟಣ ಒಂದು ಚಿಕ್ಕ ಗಿರಿಧಾಮ. ಪಳನಿ ಬೆಟ್ಟಗಳ ಪ್ರದೇಶದಲ್ಲಿ 2,343 ಮೀ.(7.688') ಎತ್ತರದಲ್ಲಿದೆ. ತಾಲ್ಲೂಕಿನಲ್ಲಿ ಇದೊಂದೇ ಪಟ್ಟಣ. ಜನಸಂಖ್ಯೆ 16,476 (1971). ಸಮೀಪದ ರೈಲುನಿಲ್ದಾಣವಾದ ನೀಲಕೊಟ್ಟೈಗೆ ಇಲ್ಲಿಂದ ಒಳ್ಳೆಯ ರಸ್ತೆಯುಂಟು. ಸುತ್ತಣ ಪ್ರಕೃತಿಸೌಂದರ್ಯದ ನೋಟವನ್ನು ಸವಿಯಲೂ ವಿಶ್ರಾಂತಿ ಪಡೆಯಲೂ ಆರೋಗ್ಯ ಸುಧಾರಿಸಿಕೊಳ್ಳಲೂ ಈ ಗಿರಿಧಾಮಕ್ಕೆ ಬರುವ ಪ್ರವಾಸಿಗಳ ಸಂಖ್ಯೆ ವರ್ಷೇವರ್ಷೇ ಅಧಿಕವಾಗುತ್ತಿದೆ.

ಕೊಡೈಕ್ಕಾನಲ್‍ನಲ್ಲಿರುವ ಸೌರವೀಕ್ಷಣಾಲಯ ಭಾರತದಲ್ಲೇ ವಿಶಿಷ್ಟವಾದ್ದು. ಹಿಂದಿನ ಮದ್ರಾಸ್ ಸರ್ಕಾರ 1792ರಲ್ಲಿ ಸ್ಥಾಪಿಸಿದ್ದ ವೀಕ್ಷಣಾಲಯವನ್ನು 1900ರ ಸುಮಾರಿಗೆ ವಿಸ್ತರಿಸಲಾಯಿತು. ಇಲ್ಲಿ ಭೂಕಂಪವಿಜ್ಞಾನ, ಸೌರ ಭೌತಶಾಸ್ತ್ರ ಮುಂತಾದ ಶಾಸ್ತ್ರಗಳ ಅಧ್ಯಯನಕ್ಕೆ ಅನುಕೂಲತೆಗಳಿವೆ.
(ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ